ಭೂಮೀ ಹುಣ್ಣಿಮೆಹುಣ್ಣಿಮೆ ಹಬ್ಬ  Bhoomi Hunnime Habba

ತರುವಾಯ ಎರಡು ದಿನಗಳಲ್ಲಿ ಸಂಭ್ರಮಕಲ್ಲಿ ಎಡೆಯಿಲ್ಲ, ಒಂದೆಡೆ ಗರ್ಭವತಿಯಾದ ಭೂಂತಾಯಿ, ಹಾಗೇ ಚೊಚ್ಚಲ ಮಕ್ಕಳಾದ ರೈತರು,
ಎಲ್ಲ ಎಲ್ಲೆಗಳ ಮೀರಿ ನಿಂತ ಆಚರಣೆ, ಭೂಮಿಯೇ ತಾಯಿ ಎಂಬ ಕಲ್ಪನೆಗೆ ಇಂಬು‌ ನೀಡುವಂತಹ ಹಬ್ಬ, ಅವಳಡವಿಯಲಿ ಬೆಳೆದುದ್ದೇ ಸಣ್ಣದಾಗಿ ಅವಳಿಗರ್ಪಣೆ  ,

 ೧೦೧ ಕುಡಿ ಗದ್ದೆ ಗುಡ್ಡಗಳಲಿ ಥರ ಥರನಾದ ಎಲೆಗಳ ಸಂಗ್ರಹಿಸಿ ,

ಗೌರೀಬಳೆಯ ತಂದು ಗದ್ದೆಯಲೊಂದು ಕೋಲುಗಳಲ್ಮೂಲಕ ಸಿದ್ಧಪಡಿಸಿದ ಆಗಮ ದ್ವಾರವ ಮಾಡಿ ಸಿಕ್ಕಿಸಿ, ,ಬೆಟ್ಟದ ನೆಲ್ಲಿ,ಕಂಚಿಕಾಯಿ,ಚೆಂಡು ಹೂವು, ಮುಂತಾದವನ್ನಿಡುವುದು, ಕಣ್ಣೇರು (ಗೋಸಗಣಿ ನೀರು)ಸಾರಿಸಿ ಬರುವುದು,
ಎಲ್ಲ ಎಲೆಗಳ ಸೇರಿಸಿ, ಉಪ್ಸೊಪ್ಪು ಪಲ್ಯೆಯ ಮಾಡಿ, ಹಾಲಿನ ಅಂಬಲಿಯ ಮಾಡಿ, ಇಬ್ಬನಿ ಹಿಟ್ಟಿನ ಸಿಹಿಪಾಕವ ಮಾಡಿ, ಬಾಳೇಎಲೆಯ ಕೊಟ್ಟೆಕಡುಬನ್ನ ಸಿದ್ಧಪಡಿಸುವುದು,
 ಸರಿಯಾಗಿ ಬೆಳಗಿನ ಜಾವ ೦೪ರ ಹೊತ್ತಿಗೆ ಎದ್ದು

ಹೊಸ ನೀರ ತಂದು ಸ್ನಾನಗೈದು, ಪೂಜಾ ಸಾಮಾಗ್ರಿ , ನೈವೇದ್ಯಗಳನ್ನೊಂದು ಬಾರಿ , ಮನೆಯ ಮಧ್ಯದೊಳಗೆ ಪೂಜೆ ಮಾಡಿ, ಅಲ್ಲಿ ಹೊತ್ತಿಸಿದ ದೀಪವನ್ನ ಹಾಗೂ ಸಕಲ ಸಾಮಾಗ್ರಿಗಳನ್ನು ಫಸಲ್ಹೊತ್ತು ಆಗಷ್ಟೇ ಹಾಲುತುಂಬಿದ ಭತ್ತದ ಗದ್ದೆಗಳೆಡೆಗೆ ಸಾಗಿಸುವುದು, 
ಗದ್ದೆಯಂಚಿನಲಿ ಸಿಂಗರಿಪ ದ್ವಾರದೆದುರಿನಲಿ, ಹೊತ್ತು ತಂದ ದೀಪವನಿರಿಸಿ,ಪುಷ್ಪಗಳಿಂದ ಅಲಂಕೃತಗೊಳಿಸಿ,ಸಕಲ ನೈವೇದ್ಯಗಳ ಮಿಶ್ರಣ ಮಾಡಿ, ಜಾಗಟೆ-ಘಂಟೆ-ಶಂಖೋನ್ನಾಧದಲಿ ಮಂಗಳಾರತಿಯ ಬೆಳಗಿಸಿ,ಇಡೀ ಪ್ರಕೃತಿಯ ಎಚ್ಚರಗೊಳಿಸಿ,

ನಿನ್ನೇ ನಂಬಿ ಬದುಕಿಹೆವು ಈ ವರುಷ ಉತ್ತಮ ಫಸಲೊದಗಲೆಂದು ಬೇಡಿಕೊಂಡು, 

.

ಹಕ್ಕಿಪಿಕ್ಕಿ ಎದ್ದಿರದ ಆಹೊತ್ತಲಿ ಮಿಶ್ರಣಿಸಿದ ನೈವೇದ್ಯೆಯ ಹೊತ್ತು, 

ಕೈಯ್ಯಲ್ಲೊಂದು ಮುಷ್ಠಿ ನೈವೇದ್ಯಯ ಹಿಡಿದು ನಾಕ್  ಸೊಲ್ಲು 

* ಅಚ್ಚಂಬ್ಲಿ,ಹಾಲಂಬ್ಲಿ,ಬೇಲಿಮೇಲೆ ದಾರಿಹೀರೇಕಾಯಿ,ಗುಡ್ಡದ್ಮೇಲಿನ್ ನೂರಾ ಒಂದ್ ಕುಡಿ ಹಾಕ್ ಮಾಡಿ ಬಯಕೆ ತಂದೀನಿ, ಭೂಮಿ ತಾಯಿ ಬಾಯ್ಬಿಟ್ಟು ಊಟಮಾಡು, ‘ಹೂಲ್ಗ್ಯ , ಹೂಲ್ಗ್ಯ’* 

ಅಂತ ಕೂಗಿ ನೈವೇದ್ಯಯ ಬೀರುತ್ತಾ ನಮ್ಮ ನಮ್ಮಗಳ ಆಸೆಯ ಈಡೇರಿಸೋ ಭೂಮಿಗೆ ಅನ್ನವ ಬೀರುತ್ತಾ ಕೂಗಿಡುತ್ತಾ ಸಾಗುವುದು,
ಮನೆ ಸೇರುವ ಹೊತ್ತಿಗೆ ಯಾರೊಡನೆ ಮಾತನಾಡುವಂತಿಲ್ಲ, ಮೌನವಾಗಿ ಬಂದು ಹಕ್ಕಿ ಹರಬಿ ಅಥವಾ ಅಕ್ಕಿ ಹೊತ್ತ ಪತ್ತಾಸಿನೊಳಗೆ ಆ ನೈವೇದ್ಯಯ ಪ್ರೋಕ್ಷಿಸಿದ ಕೈಯ್ಯನು ಸ್ವಚ್ಛಗೊಳಿಸತಕ್ಕದ್ದು
ಹಾಗೆಯೇ, ಪಾತ್ರೆಯಂಡಲಿ ಉಳಿಸಿಕೊಂಡ ನೈವೇದ್ಯಯ ಎಲ್ಲರೂ ರುಚಿಸತಕ್ಕದ್ದು, 

“ವರ್ಷದ ಕೂಳನೀಯ್ವ ಭೂಂತಾಯಿಗೆ ಒಂದಿನದ ಊಟ”

ಈ ಎಲ್ಲಾ ಸಂಪ್ರದಾಯ ತಕ್ಕ ಆಚರಣೆಗಳು ಕೇವಲ ಭಯ-ಭಕ್ತಿಯ ಸ್ವರೂಪವಲ್ಲವಾದರೂ, ಪ್ರಕೃತಿ ಹಾಗೂ ಮಾನವ  ಜೀವಿಗಳ ನಡುವಣ ಸಂಬಂಧಗಳನ್ನ ಬಂಧಿಸುವಲ್ಲಿ ಇದೊಂದು ಹಬ್ಬದ ಮಹತ್ವ ಶ್ರೇಷ್ಠವಾದದ್ದು, 

ಹಾಗೆಯೇ ಆ ದಿನ ಭೂಮಿಯನ್ನು ಘಾಸಿಗೊಳಿಸುವಂತಹ , ಅರ್ಥಾತ್‌ ಅಗೆಯುವುದು, ಹೊಂಡ ತೋಡುವುದು , ಇತರೆ ಕೆಲಸಗಳನ್ನು ಮಾಡುವಂತಿಲ್ಲ,
ಆ ನೂರಾ ಒಂದು ಎಲೆಗಳಲ್ಲಿ, ಎಷ್ಟು ವಿಷದ್ದಿರುತ್ತವೋ, ಎಷ್ಟು ನಂಜಿನದ್ದಿರುತ್ತವೋ, ಎಷ್ಟು ಅಂಮೃತವಾಗಿರುತ್ತವೋ, ಎಷ್ಟು ಔಷಧಯುಕ್ತವಾಗಿರುತ್ತವೋ ತಿಳಿಯದು, ಆದರವೆಲ್ಲವನ್ನು ಸ್ವೀಕರಿಸುವುದು ಆರೋಗ್ಯಕ್ಕೆ ಕಷಾಯದಂತೆ ಅನ್ನೋದು ಮಾತ್ರ, ವೈಜ್ಞಾನಿಕ, 

-ಅಲ್ಪವಿರಾಮಿ

#ಅಲ್ಪವಿರಾಮಿತ_ನಿತ್ಯಸ್ಮರಾಮಿತ_ಮೌನಗಮನವೀಯುತ

#ಭೂಮಿಹುಣ್ಣಿಮೆ #ಭೂಂತಾಯಿಯ_ಬಯಕೆಶಾಸ್ತ್ರ

ಹಾರುವ ಓತಿ Draco Volans (ಕರ್ವಾಲೋ)

ನಾನು ಪುಸ್ತಕಗಳನ್ನು ಓದಿದ್ದು ಬಹಳಾ ಕಡಿಮೆ , ಪೂರ್ಣವಂತೂ ಇಲ್ಲ, 

ಆದರೆ ಪೂರ್ಣವಾಗಿ ಓದಿದ ಪುಸ್ತಕವೆಂದರೆ ಕುಪ್ಪಳ್ಳಿ(ಕೇ)ಪುಟ್ಟಪ್ಪನವರ (ಪಿ) ಮಗನಾದ ಪೂರ್ಣಚಂದ್ರ ತೇಜಸ್ವಿಯವರ “ಕರ್ವಾಲೊ” (ಅರ್ಥಾತ್: ಸಾಮರ್ಥ್ಯವುಳ್ಳ) ಕಾದಂಬರಿ ಆಕೃತ ಘಟನೆಗಳ ಸಾರವನ್ನು ಸಾಲು ಸಾಲುಗಳಲ್ಲಿ ನಮ್ಮನ್ನ ಹಿಡಿದಿಡುವಂತ ಸಾಮರ್ಥ್ಯಗಳುಳ್ಳ ಕಥೆಗಳು,

ಅವರ ಈ ಕಾದಂಬರಿಯ ನಿಜಸಾರ ಒಂದು ಬಗೆಯ ಮಲೆನಾಡಿನಲ್ಲಿ ಅಸಾಮಾನ್ಯವಾಗಿ ಕಂಡುಬರುವ ಓತಿಕ್ಯಾತ, ‘ಹಾರುವ ಓತಿಯ’ ಬಗೆಯ ಬಗ್ಗೆ,

.
ಅವರು ವಿವರಿಸುತ್ತಾ ಹೋಗುವಂತೆ ಜಗತ್ತಿನಲ್ಲಿ ಅತೀ ಹಿಂದೆಯೇ ಈ ಓತಿಯ ಸಂತಾನವಡಗಿದೆಯೆಂಬ ಮಹಾನ್ ವ್ಯಕ್ತಿಗಳ  ಪ್ರತಿಪಾದನೆಗಳ ನಡುವೆ, 

ಅವರಿಗೆ ಮಲೆನಾಡಿನ ಒಂದು ಸಣ್ಣ ಹಳ್ಳಿ , ನಮ್ಮೂರಿನಿಂದ ಬಹುಶಃ ಸರಿಸುಮಾರು ೩೫-೪೦ ಮೈಲು ನಾರ್ವೆ ಎಂಬ ಊರು, ಅಲ್ಲಿನ ಪ್ರಾಪಂಚಿಕ ಜಾಡಿನ ಹಿನ್ನೆಲೆ ಸಾಬೀತುಪಡಿಸುವ ಸಾರವನ್ನೇ ಮೈದುಂಬಿರುವ ಸಾಂಧಾರ್ಬಿಕ ಕಥನ, 

ಒಬ್ಬ ಹಳ್ಳಿಯ ಮಾಮೂಲಿ ವ್ಯಕ್ತಿಯಿಂದ ತಿಳಿಯಲ್ಪಟ್ಟ ಹಾರುವ ಓತಿಯ ಕೌತುಕ,ಅದರ ಹಿಂದೆ ಬಿದ್ದು ಸಾಗುವ ನಾಗಾಲೋಟದ ಪರಿ, ಇದರ ಸಾರ; 

.
ಹಾಗೆಯೇ ನಾನೇ ಕಂಡದ್ದು ಬಹುಶಃ ೭-೮ ವರ್ಷಗಳ ಹಿಂದೆ,

ನಾನೊಮ್ಮೆ ನಮ್ಮ ಮನೆಯ ಅಡಿಕೆ ತೋಟದಲ್ಲಿ ಅಡಿಕೆ ಕೊನೆ ತೆಗೆಯುವ ಸಮಯದಲ್ಲಿ ಅಡಿಕೆ ಮರದ ಕೊನೆ ರಾಶಿಯಿಂದ ಒಂದು ಓತಿಯ ಸ್ವರೂಪದ ಜೀವಿಯೊಂದು ಹಾರಿ, ಮರವೊಂದನ್ನ ಹತ್ತುತ್ತಿರುವುದನ್ನು ಅಸ್ಪಷ್ಟವಾಗಿ ಕಂಡಿದ್ದೆ, ಆವತ್ತು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ, ತರುವಾಯ ವರುಷಗಳಲ್ಲಿ ನಾನವರ ಕಾದಂಬರಿಯನ್ನು ಓದಿದ್ದಾಗ ಅಂದು ಅರಿವಾಗಿದ್ದು, ಛೇ ಅದರ ಹಿಂದೆ ಬಿದ್ದು ನೋಡಬೇಕಿತ್ತು ಎಂದು, 

.
ಈ ಹಾರುವ ಓತಿಯದ್ದು ಮಹತ್ತರ ವಿಶಿಷ್ಠತೆಗಳಂತದ್ದೇನಿಲ್ಲ, ಆದರೆ ಸಹಸ್ರ ವರುಷಗಳಿಂದ ಇದರದೊಂದು ತಳಿ ಮಾತ್ರ ,ಕಾಲುಗಳ ಬುಡದಲ್ಲಿ ಹೊಟ್ಟೆಯ ಮಧ್ಯಭಾಗದ ಇಕ್ಕೆಲಗಳಲ್ಲೂ ಬಾವಲಿಗಳಲ್ಲಿರುವಂತಹ ಪೊರೆಯ ರಚನೆ ಹೊಂದಿದ್ದು, ಮಡಚಿಕೊಂಡಾಗ ಮಾಮೂಲಿ ಓತಿಯಂತೆ ತೋರುವುದು, ಯಾವಾಗ ತನ್ನಿಚ್ಚೆ/ಅಪಾಯದ ಮುನ್ಸೂಚನೆಗಳು ಬರುತ್ತದೋ ಆಗ ಪೊರೆಯನ್ನು ಬಿಚ್ಚಿ, ಗಾಳಿಯಲ್ಲಿ ತೇಲಿಹೋಗಿ ಮತ್ತೊಂದೆಡೆ ಇಳಿಯುತ್ತದಷ್ಟೆ, 

.
ಆದರೆ ಅಷ್ಟು ಯುಗಗಳಿಂದ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡುಬಂದ ಆ ಸಣ್ಣ ಜೀವಿಯು ನಮ್ಮ‌ನಿಮ್ಮೆಲ್ಲರಿಗೂ ಒಂದು‌ಮಾದರಿಯಂತೆಯೇ ತೋರುತ್ತದೆ ನನ್ನ ಪ್ರಕಾರ :

ನಮ್ಮ ನಾಡು-ನಾಡ ಭಾಷೆ-ನಾಡ ಸಂಸ್ಕೃತಿ-ಮುಂದಿನ ಪೀಳಿಗೆಗೆ ಸಂಪದ್ಭರಿತ ಪ್ರಕೃತಿ,  ಜತನದಿಂದುಳಿಸಿಕೊಂಡು ಅಸ್ಥಿತ್ವವ ಉಳಿಸಿಕೊ/ಡೋಣ/ಳ್ಳೋಣ ಎಂಬ ಅರಿವಂತೂ ಕೊಡುತ್ತದೆ, ತೆಗೆದುಕೊಳ್ಳುವ ದೊಡ್ಡತನ-ಸಣ್ಣತನ ನಮ್ಮ-ನಿಮ್ಮಲ್ಲಿದೆಯಷ್ಟೇ….🌿☺

– ಮೌನಗಮನಿ

#ಕರ್ವಾಲೋ #ಮಲೆನಾಡ_ಸೋಜಿಗ

ಶಿಕ್ಷಕರ ದಿನಾಚರಣೆ

೦೫-ಸೆಪ್ಟೆಂಬರ ದಿನ

ಮನೆಯಂಗಳದಲ್ಲೊಂದು ಶಾಲೆ, ತಂದೆ ತಾಯಿ ಬಂಧುಗಳೇ ಅಲ್ಲಿ ಮಾರ್ಗದರ್ಶಕರುಗಳು

 ಬಿದ್ದಾಗ-ಎದ್ದಾಗ ಗದ್ದುಗೆಗೇರಿಸಿ ಮೆರೆಸಿ ಹಾರೈಸಿ ನಡತೆಗಳನುಸುರಿ ನಡೆಸುವರು ..

    ರಸ್ತೆಗಿಳಿದ ಕಾಲುಗಳು ಎಡವಿದಾಗ ಎಡವದಂತೆ ಸಂಭಾಳಿಸಲನುವು ಕುಟುಂಬ ಜ್ಞಾನ,

ಎಡವಿದ್ದು ಕಲ್ಲಾದರೆ ಬದಿಗೊಮ್ಮೆ ಸರಿಸಿ ಹೋಗು, ಕಲ್ಲಲ್ಲವೆಂದರೆ ನಡೆಯ ನಡತೆಯ ಬದಲಿಸಿಕೊಳ್ಳೆನ್ನುವುದೇ ಅರಿವಿನ ಜ್ಞಾನ,

ಗುರುವೇ ಅರಿವು – ಅರಿವೇ ಗುರುವು.

ಜೀವನವೆಂಬ ಹೂದೋಟದಲಿ ಬಣ್ಣಗಳಣ ಹೂವ ಅರಳಿಸಿ, ಕಳೆ ಕಿತ್ತು, ಬುಡಕ್ಕೊಂದಷ್ಟು ಅರಿವು, ಕಾಂಡಕ್ಕೊಂದಷ್ಟು ಜ್ಞಾನ, ಮೊಗ್ಗಾಗಿ-ಹೂವಾಗಿ-ಕಾಯಾಗುವಲ್ಲೊಂದು – ವಿಜ್ಞಾನ ಸುಜ್ಞಾನದ ನೀರುಣಿಸಿ, ಸದಾ ಹಸಿರಾಗಿರಲೆಂದು ಕಾಯಕಲ್ಪಗಳ ಕಲಿಸಿ, ಬೃಹದ್ಜೀವನಕೆ ನವೀಕರಣದ ಕೊಡುಗೆಗಳಿಗೆ ಮಹಾನ್ಪಾತ್ರದಾರಿ ಈ ಗುರುವು.

‘ಗುರು ಎಂದಾಕ್ಷಣ ಶಿಕ್ಷಕರೇ ಎಂದೆನ್ನಲಾಗುವುದಿಲ್ಲ, ನಾವೇನನ್ನು ಕಲಿತಿದ್ದೇವೆ , ಯಾವುದರಿಂದ ಬದಲಾವಣೆಯಾ/ಗಿದೆ/ಗುತ್ತದೆ ಎಂಬುದನ್ನು ಅರಿಯುವ ಪರ್ವಕಾಲವೇ ಗುರು’

ಆದರೂ

 ‘ಮೊದಲ ಅಕ್ಷರ ಬೀಜಗಳನ್ನೆದೆಗೆ ಬಿತ್ತಿರುವ ಗುರುವೃಂದದವರಿಗಿಂದು ವಿನಂಮ್ರತೆಯ ನಮನ’🌿🙏

ಕುವೆಂಪು ವೈಚಿತ್ರ್ಯ

ನಾನು ಹುಟ್ಟಿದ ವರುಷವೆ ಅವರು ತೀರಿಕೊಂಡಿದ್ದಂತೆ,ಅವರನ್ನೊಮ್ಮೆ ನೋಡಬೇಕಿತ್ತು ಎಂದು ಯಾವಾಗಲೂ ಎಂದುಕೊಳ್ಳುತ್ತಿರುವೆನು,

ಒಂದು ಕುಗ್ರಾಮ ಕುಪ್ಪಳಿ, ಕೊಪ್ಪ-ತೀರ್ಥಹಳ್ಳಿಯ ಸೇತುಬಂಧದ ಊರೆನ್ನಬಹುದು, ಅಲ್ಲಿದ್ದವರು ರಾಷ್ಟ್ರಮಟ್ಟದ ಮನ್ನಣೆ ಹೇಗೆ ಸಾಧ್ಯವಾಯಿತೆಂದು ಊಹಿಸಲಸಾಧ್ಯ,

ವಿಶ್ವಮಾನವನಾಗಿದ್ದಾದರು ಹೇಗೆ ಅಂತ,

ನನಗರಿವಾದದ್ದು ಹುಟ್ಟಿನಿಂದ ಯಾರೂ ದೊಡ್ಡವರಾಗೋದಿಲ್ಲ, ಬೆಳೆದಂತೆಲ್ಲಾ ಜ್ಞಾನ ವಿಸ್ತಾರಿಸಿಕೊಳ್ಳುವುದರಿಂದ ಎಂತಹ ದರಿದ್ರನಾದರೂ ಉತ್ತಮನೆನಿಸಿಕೊಳ್ಳುತ್ತಾನೆಂದು,

ಅವರ ಒಂದೊಂದು ಬರಹವು ಅದಾವುದೋ ಹೊಸ ವೈಚಾರಿಕತೆಯ ಹೊತ್ತು , ಅದೆಷ್ಟೋ ಮೂಢತೆಗಳ ಮೌಢ್ಯಗಳ ನಡುವೆಯೇ, ಬೇವಿನ ಮರದ ತಂಪ ಘಮಲ ತೀಡಿ ಸೂಸುವ ಘಮಲು ಇಂದಿಗೂ ಜೀವಂತ,

ಆ ಪ್ರಶಾಂತ ವನದ ಚೌಕಿಮನೆಯನ್ನ, ಅದರಲ್ಲಿನ ಸೊಗಡನ್ನ ಪ್ರತಿಯೋರ್ವರು ನೋಡರಿತು ತಲ್ಲೀನರಾಗಲು

ಒಮ್ಮೆಯಾದರು ಭೇಟಿ ಕೊಡದೆ ಇರಬೇಡಿ..

ತೀರ್ಥಹಳ್ಳಿಯ ದೇವಂಗಿ ಮಾರ್ಗದಿಂದ ೨೦ಕಿಲೋಮೀಟರು ಅನತಿಯಲ್ಲಿದೆ

ಕುಪ್ಪಳಿ

ಹಿರೇಕೊಡಿಗೆ,ಕೊಪ್ಪ ತಾಲ್ಲೂಕು

ಚಿಕ್ಕಮಗಳೂರು .

ಪರ್ಯಾಯ ಹಸ್ತ

:||ಜೀವನ = ಜೀವದ+ವನ  ಅನ್ನಬಹುದೇನೋ,||:

ನೂರು ವ್ಯಕ್ತಿಗಳಿಗೆ ಜೀವನ ಅಂದರೇನು ಅಂತ, ಇಲ್ಲವೇ ಕೆಲವೊಂದು ಪದಗಳನ್ನ ನೀವು ಉಚ್ಛರಿಸಿದ ನಂತರ ಆ ಕೇಳುಗ ವ್ಯಕ್ತಿಗಳ ಮನದಲ್ಲಿ ತಟ್ಟನೆ ಮೂಡುವಂತಹ ಆಲೋಚನೆ ಅಥವಾ ಅನಿಸಿಕೆ ಅಥವಾ ಪದಗಳನ್ನು  ಬರೆಯಲು ಹೇಳಿದರೆ ಹಲವು ಬಗೆಯಲ್ಲಿ ;
ವಿಸ್ತಾರ,ತಾತ್ಸಾರ,ಮಥ್ಸರ,ವೈಷಮ್ಯ,ನೋವು,ಖುಷಿ,ಸಿಡಿಲಿನ ಗುಣಗಳುಳ್ಳ ಉತ್ತರವನ್ನು ಪಡೆಯಲೂಬಹುದು , ಪಡೆಯದೇನೇ ಇರಲೂಬಹುದು.
ಪ್ರತಿಶತ ೪೦%ದಷ್ಟು ಒಂದೇ ತೆರನಾದ ಉತ್ತರವಿರಬಹುದು, ಇನ್ನುಳಿದ ೫೮%ದಷ್ಟು ಭಿನ್ನ ವಿಭಿನ್ನವಾಗಿರಬಹುದು , ಹಾಗೂ ಇನ್ನುಳಿದ ೦೨%ದಷ್ಟು ಮಂದಿ ಸೊನ್ನೆಯ ಮೊದಲೇ ಹೊತ್ತು ಎಲ್ಲದರ ನಡುವಿನ ಗೊಂದಲಗಳ ಸೇತುಬಂಧಗಳಂತೆ, ಎಲ್ಲಿ ,ಏನು,ಯಾವುದು,ಯಾಕೆ,ಯಾವಾಗ,ಎಷ್ಟು, ಎಂಬೆಲ್ಲಾ ಮೂಲಧಾತುಗಳಲ್ಲಿ ತಮ್ಮನ್ನು ತಾವು ಕಳೆದುಹಾಕಿಕೊಂಡು ಯಾವಾಗಲೂ ಗೊಂದಲದ ಗೂಡಲ್ಲೆ ,ಹಾರಾಟಕ್ಕಾಗಿ ತೆವಳುತ್ತಿರುತ್ತಾರೆ ,
ಸಣ್ಣ ಸಮಸ್ಯೆಗಳೆದುರಾದವೆಂದರೆ, ಯಾವುದೋ ಒಂದು ಜಗತ್ತು ಕಳೆದುಕೊಂಡಷ್ಟು ತಲೆಬಿಸಿ ಮಾಡಿಕೊಂಡು, ಚಿಂತಾಕ್ರಾಂತರಾಗುತ್ತಾರೆ, ಇವರುಗಳು ಉಳಿದವರಿಗಿಂತ ಭಿನ್ನ ಮನೋಭಾವದವರಾದರೂ, ತುಂಬಾ ಚುರುಕೇನಲ್ಲ, ಆದರೆ ಬುದ್ಧಿವಂತರೇ, ಜಾಣ-ಪೆದ್ದು ಅನ್ನಬಹುದು,
ಇವರಿಗೆ ಅರಿವ ಮನಸ್ಕರು ಒಂದು ಕೂದಲೆಳೆಯಷ್ಟು ಕಾಳಜಿ,ಸ್ಪೂರ್ತಿ, ಮಾತು,ಗಮನ ಕೊಟ್ಟರೆ ಅವರಾವ ಸಾಧನೆಯ ಮಾಡರೋ, ಅವರಿಗೆ ಗೊತ್ತಿರಲಾರದಂತ ಸಾಧನೆ ಮಾಡಬಲ್ಲರು, ಆದರಿಲ್ಲಿ, ಅವರನರಿವ ಮನಸ್ಸುಗಳ ಕೊರತೆಯಿದೆಯಷ್ಟೇ

ಸ್ಥರ . ಸಾವಿರ

ಬದುಕಿರುವಷ್ಟು ದಿನ ಏನನ್ನೋ ಹುಡುಕಬೇಕು, ಇನ್ನೇನನ್ನೋ ಸಾಧಿಸಬೇಕು, ಮತ್ತೆಲ್ಲೇನೋ ಇರಬೇಕೆಂದೆಲ್ಲಾ, ಹಂಬಲಿಸೋ ಜೀವಕೆ, ತಾನಿರುವ ಜಾಗ ಬರೀ ಗೊಬ್ಬರದ ರಾಶಿಯಂತನಿಸುವುದು ಸಹಜ,

ನೀರು ನಿಂತಲ್ಲಿ ನಿಲ್ಲಬಾರದು ,ಹರಿಯುತಲೇ ಇರಬೇಕು, ಕಷ್ಟನಷ್ಟಗಳ ತುಂಬಿಕೊಂಡು ಬಳುಕಬೇಕು,

ಸಿದ್ಧಾಂತಗಳು ಆದರ್ಶಗಳವು, ಚೇತನಾವಸ್ಥೆಯ ಕಾಯ್ದುಕೊಳ್ಳುವ ಸ್ಥಿತಿಗಳೇ ಹೊರತು, ಬರೀ  ಅವೇ  ಜೀವನದ ನೀತಿಗಳಲ್ಲ,

ಒಂದಷ್ಟನ್ನ ಬಿಡಲೂಬೇಕಾಗುತ್ತದೆ, ಇನ್ನೇನನ್ನೋ ಧರಿಸಿಕೊಳ್ಳಲೂಬೇಕಾಗುತ್ತದೆ, ಎಲ್ಲವನ್ನೂ ಅವುಡುಗಚ್ಚಿಹೋದರೆ, ತನ್ನದೆಂಬುದು  ದೂರವೇ ಸರಿಯುತ್ತಲಿರುತ್ತದೆ, 

ಭರವಸೆಗಳಿಲ್ಲದಿದ್ದರೂ ಮುನ್ನುಗ್ಗಿ ನಡೆಯಬಲ್ಲ ಭಂಡ ಧೈರ್ಯವೂ ಬೇಕಾಗುತ್ತದೆ, ಜೀವನವು ಒಂದಷ್ಟನ್ನು ನಡೆಯಲು ಬಿಡುತ್ತದೆ, ಇನ್ನೊಂದಿಷ್ಟನ್ನು ನಡೆಸಲು ಪಾಲಿಗಿರಿಸಿರುತ್ತದೆ, 

ನಾವುಗಳ ಬರೀ ಇದ್ದೆವ ,ಮಾಡಿದೆವಾ, ಹೋದೆವಾ ಅಂತಾಗಬಾರದು, ಒಂದಷ್ಟನ್ನ ಬದಲಿಸಬೇಕು, ಒಂದಷ್ಟವರಿಗೆ ಅರಿವಾಗಬೇಕು, ಇನ್ನೊಂದಷ್ಟವರಿಗೆ ನೆರವಾಗಬೇಕು, ಯಾವುದೂ ಆಗಿಲ್ಲವೆಂದರೆ ತನ್ನ ಸಂಸಾರದೇಳಿಗೆ ನೋಡಬೇಕು ಆಗಷ್ಟೇ ಸ್ವಾಸ್ಥ್ಯ ಸಮಾಜದ ಮುನ್ನುಡಿ ಪ್ರಾರಂಭವಾಗಿರುತ್ತದೆ,

ನಾ ಬರೆದ ಮಾತ್ರಕ್ಕೆ ನನಗದರರಿವು ಅಷ್ಟಿದೆಯೆಂದಲ್ಲ , ಆದರೆ ಯೋಚನೆಗಳಿಗದರರಿವಿದೆ ಅದಕ್ಕಿಲ್ಲಿ ಪ್ರಸ್ಥಾಪಿಸಿದೆ,

ಜೀವನದ ಪ್ರತಿ ಸ್ಥರಗಳಲ್ಲಿ ಅರಿವಾಗಿಲ್ಲವಂದೆನಗೆ ಆದರೆ,ಶಾಂತ ಚಿತ್ತತೆಯಲಿ ನನ್ನನಾ ಬಳಸಿದಾಗ ಎಲ್ಲವೂ ಒಂದೊಂತರಾ ಮೆಟ್ಟಿಲುಗಳೆನಿಸಿದವು…😊

ಗುಜಮಸ

ನೀಲಾಂಜನ ಮತ್ತು ಅಜ್ಜಿ


ನೀಲಾಕಾಶ ಮಸುಕಾದಂತೇ, ಅಜ್ಜಿಯ ಮಣಮಣ ಶುರುವಾಗುತ್ತಿತ್ತು,  ದೇವರಿಗೆ ನೀಲಾಂಜ್ಙೆ ಇಡ್ಲಿಲ್ಲಲಾ ಎಂದು, 

ನಮದೋ ಒಂದು ತೆರನಾದ ಆಲಸ್ಯ, ಸರಿಯಾಗಿ ಏಳರ ಹೊತ್ತಿಗೆ ವಿದ್ಯುತ್ ಪ್ರವಾಹ ನಿಂತ್ಹೋದಾಗ ದೀಪದ ಗೂಡ ಹುಡುಕಲು ಅಜ್ಜಿ ಮುಂಡ್ರಾಡ್ತಾ ಹುಡುಕಲು , ಮಧ್ಯದೊಳಗೆ ಹಚ್ಚಿದ ನೀಲಾಂಜನೆಯ ತೊನೆದಾಟದ ಬೆಳಕೇ ದಾರಿ, 

ಅದೊಂತರದ ಅಜ್ಞಾನದ ಹಾದಿಯಲಿ ಜ್ಞಾನದ ಬೆಳಕಂತೆ ಒಂದಷ್ಟು ದೂರ ಸಾಗಲು ನೆರವಿಗಿತ್ತು,

ಎಲ್ಲ ಅರಿವಾಗುವ ಹೊತ್ತಿಗೆ ಅಜ್ಜಿ ಇಹದಲ್ಲಿರಲಿಲ್ಲ, ಹಚ್ಚುವ ಒಂದಿರುಳ ನೀಲಾಂಜನೆಯೆಂದರೆ , ನಾ ಹೊಸ್ತಿಲು ದಾಟಿ ಸಾಗರಗಳ ದಾಟಿ ಬಂದಾಗಿತ್ತು,

ಅಂದಿನಿಂದ

ಒಂದಿಲ್ಲೊಂದು ನೆನಪುಗಳಲ್ಲಿ ‘ ಅಜ್ಜಿ ಮತ್ತು ನೀಲಾಂಜನ ‘

ಮಲೆನಾಡ ಪುಣ್ಯಕ್ಷೇತ್ರ ಮೃಗಾವಧೆ (ಮಾರೀಚ ಮೃಗಾವಧೆ)

ಮೃಗವಧೆ ತೀರ್ಥಹಳ್ಳಿ ತಾಲ್ಲೂಕಿನ ಒಂದು ಪುರಾಣ ಪ್ರಸಿದ್ಧ ಸ್ಥಳ .ರಾಮಾಯಣ ಕಾಲದಲ್ಲಿ ಸೀತೆ ಮಾಯಾಜಿಂಕೆಯನ್ನು ಬಯಸುವಂತಹ ಪ್ರಸಂಗ ಈ ಸ್ಥಳದಲ್ಲಿಯೇ ನಡೆದಿದೆಯೆಂದು ಇಲ್ಲಿನ  ಸ್ಥಳಪುರಾಣ ಹೇಳುತ್ತದೆ  .ವನವಾಸದಲ್ಲಿ ರಾಮ ಸೀತೆ ಲಕ್ಷ್ಮಣ ಇಲ್ಲಿ ಕೆಲ ಕಾಲ ಇದ್ದರು ಎನ್ನುತ್ತವೆ ಇಲ್ಲಿನ ಸ್ಥಳಪುರಾಣ. .ಇಂತಹ ಸುಂದರ ಸ್ಥಳ ತೀರ್ಥಹಳ್ಳಿ  ತಾಲ್ಲೂಕಿನ ಈ ಮೃಗವಧೆ. ಇದು  ತೀರ್ಥಹಳ್ಳಿ ತಾಲೂಕಿನ ಗಡಿಯಂಚಿನ ಗ್ರಾಮವಾಗಿದೆ .ತೀರ್ಥಹಳಿ ಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ ಹಾಗೆ ಕೊಪ್ಪದಿಂದ ಸುಮಾರು ಇಪ್ಪತ್ತೆರಡು ಕಿಲೋಮೀಟರ್ ದೂರದಲ್ಲಿದೆ .

 ಇಲ್ಲಿನ ಪ್ರಾರಂಭದಲ್ಲಿ ಇರುವಂತಹ ಶನೇಶ್ವರ ಸನ್ನಿಧಿ ಇಡೀ ಮಲೆನಾಡು ಪ್ರಾಂತ್ಯಕ್ಕೆ ಹೆಸರು ಮಾಡಿದೆ .ಕಾಡು ಗುಡ್ಡ ನದಿ ಹೀಗೆ ಇಲ್ಲಿನ ಹಸಿರು ಪರಿಸರ ನೋಡುಗರ ಕಣ್ಮನ ಸೆಳೆಯುತ್ತದೆ .ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ನಾವು ಸಕಲ ದುಃಖಗಳನ್ನು ಮರೆಯಬಹುದಾಗಿದೆ .ವನವಾಸ ಸಂದರ್ಭದಲ್ಲಿ ಶ್ರೀ ರಾಮ ಸೀತೆಯ ಕೋರಿಕೆಯಂತೆ ಚಿನ್ನದ ಜಿಂಕೆಯನ್ನು ತಂದು ಕೊಡಲು ಬೆನ್ನಟ್ಟಿಕೊಂಡು ಹೋದ ಕಥೆ ಅನೇಕರಿಗೆ ಗೊತ್ತಿದೆ. ಜಿಂಕೆ ರೂಪದಲ್ಲಿ ಬಂದಿದ್ದ ಮಾರೀಚ ರಾಮನ ಬಾಣಕ್ಕೆ ಹತನಾಗುತ್ತಾನೆ. 
ರಾಮ ಮಾರೀಚನನ್ನು ಹತ್ಯೆ ಮಾಡಿದ ಈ ಸ್ಥಳಕ್ಕೆ ಮಾರೀಚ ಮೃಗವಧಾ ಕ್ಷೇತ್ರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಬ್ರಹ್ಮ ಹತ್ಯೆಯ ಕಳಂಕದಿಂದ ಪಾರಾಗಲು ರಾಮ ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದ ಎಂದು ಸ್ಥಳಪುರಾಣ ಹೇಳುತ್ತದೆ 

 

ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಇಲ್ಲಿನ ವೈಶಿಷ್ಟ್ಯ. 
ಚಾಲುಕ್ಯರ ಕಾಲದ ಶಿಲ್ಪಕಲೆಯನ್ನು ಒಳಗೊಂಡಿರುವ ಈ ದೇವಸ್ಥಾನವನ್ನು ಚಾಲುಕ್ಯ ಅರಸ ತ್ರಿಭುವನಮಲ್ಲ 1060ರಲ್ಲಿ ನಿರ್ಮಿಸಿದನು. ಕಾಲಾನಂತರ ಅವಸಾನದ ಹಂತದಲ್ಲಿದ್ದ ದೇವಾಲಯವನ್ನು ಕೆಳದಿ ಸೋಮಶೇಖರ ನಾಯಕನ ಕಾಲದಲ್ಲಿ ಪುನರುತ್ಥಾನ ಮಾಡಲಾಯಿತು. 
ಈ ಗ್ರಾಮದ ಕೆಲವು ಭಾಗಗಳಲ್ಲಿ ಅರಮನೆ ಅಥವಾ ಅಗ್ರಹಾರಗಳಿತ್ತು ಎನ್ನುವುದಕ್ಕೆ ಕುರುಹುಗಳಿವೆ. ಹಳೆಯ ಕಾಲದ ನಿವೇಶನ, ಬಂಡೆ ಮೇಲಿನ ಅಪರೂಪದ ರೇಖಾಚಿತ್ರಗಳು, ಇಟ್ಟಿಗೆಗಳು ದೊರೆತಿದ್ದರೂ, ಸೂಕ್ತ ಸಂಶೋಧನೆ ನಡೆಯದ ಕಾರಣ ಇಲ್ಲಿನ ಇತಿಹಾಸ ಇನ್ನೂ ಬೆಳಕಿಗೆ ಬಂದಿಲ್ಲ.
ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಪಂಜುರ್ಲಿ ಧೂಮಾವತಿ, ಪದ್ಮಾವತಿ, ಕ್ಷೇತ್ರಪಾಲ ಸೇರಿದಂತೆ ಈಶ್ವರನ ಸಮಸ್ತ ಗಣಗಳೂ ನೆಲೆಸಿವೆ ಎನ್ನಲಾಗಿದೆ. ಪ್ರತಿ ವರ್ಷ ಫಾಲ್ಗುಣ ಬಹುಳದಂದು ಐದು ದಿನ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಡೆಯುತ್ತದೆ.

 

ಒಂದು ಕಾಲದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಪೂಜೆ ಅತಿ ವೈಭವದಿಂದ ನಡೆಯುತ್ತಿತ್ತು. ಹಲವು ವಿಶಿಷ್ಟ ಆಚರಣೆಗಳನ್ನೂ ಆಚರಿಸಲಾಗುತ್ತಿತ್ತು. ನಿತ್ಯಬಲಿ, ತ್ರಿಕಾಲ ಪೂಜೆ, ಆಗಮೋಕ್ತಿ, ಹಗಲು ದೀವಟಿಗೆ, ಕಾರ್ತಿಕ ದೀಪೋತ್ಸವ, ಅಷ್ಟಾವಧಾನ ಸೇವೆಗಳು ಇಲ್ಲಿನ ಪ್ರಮುಖ ಸೇವೆಗಳಾಗಿವೆ. 
ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಸಮಯಗಳಲ್ಲಿ ಇಲ್ಲಿ ಪೂಜೆ ನಡೆಯುತ್ತದೆ. 

ಶನೀಶ್ವರ, ಶಂಕರೇಶ್ವರ, ಉಗ್ರ ನರಸಿಂಹ ಮತ್ತು ಆಂಜನೇಯ ದೇವರುಗಳ ಚಿಕ್ಕ ದೇವಾಲಯಗಳೂ ಇಲ್ಲಿವೆ. 
ಪಾರ್ವತಿ ತನ್ನ ಮೇಲಿನ ಅಪವಾದವನ್ನು ಕಳೆದುಕೊಳ್ಳಲು ಮತ್ತು ಶನಿ ದೇವನ ಪ್ರಭಾವಕ್ಕೆ ಒಳಗಾಗಿ ತನ್ನ ಲಯದ ಕಾರ್ಯವನ್ನೇ ಮರೆತು ಅಡ್ಡಾಡುತ್ತಿದ್ದ ಈಶ್ವರನಿಗೆ ಮುಕ್ತಿ ನೀಡಲು ಅಗ್ನಿಪ್ರವೇಶ ಮಾಡಲು ಮುಂದಾದ ಸ್ಥಳ ಇದು ಎಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿನ ಶನೀಶ್ವರ ದೇವಾಲಯ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. 
ಶ್ರಾವಣ ಮಾಸದ ಶನಿವಾರದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. 

ಮೃಗವಧೆ ಪುಟ್ಟ ಹಳ್ಳಿಯಾದರೂ ಇಲ್ಲಿಗೆ ಆಗಮಿಸುವ ಭಕ್ತರಿಗೆ ನಿತ್ಯವೂ ಭಕ್ತರು ನೀಡುವ ದೇಣಿಗೆಯಿಂದ ಮಧ್ಯಾಹ್ನ ಅನ್ನದಾನ ನಡೆಸಲಾಗುತ್ತಿದೆ. 

(ಮಾಹಿತಿ:-ವಿವಿದ ಮೂಲಗಳಿಂದ)

.ತೀರ್ಥಹಳ್ಳಿ ತಾಲ್ಲೂಕು,ಮೃಗಾವಧೆ

Create a free website or blog at WordPress.com.

Up ↑