ಭೂಮೀ ಹುಣ್ಣಿಮೆಹುಣ್ಣಿಮೆ ಹಬ್ಬ  Bhoomi Hunnime Habba

ತರುವಾಯ ಎರಡು ದಿನಗಳಲ್ಲಿ ಸಂಭ್ರಮಕಲ್ಲಿ ಎಡೆಯಿಲ್ಲ, ಒಂದೆಡೆ ಗರ್ಭವತಿಯಾದ ಭೂಂತಾಯಿ, ಹಾಗೇ ಚೊಚ್ಚಲ ಮಕ್ಕಳಾದ ರೈತರು,
ಎಲ್ಲ ಎಲ್ಲೆಗಳ ಮೀರಿ ನಿಂತ ಆಚರಣೆ, ಭೂಮಿಯೇ ತಾಯಿ ಎಂಬ ಕಲ್ಪನೆಗೆ ಇಂಬು‌ ನೀಡುವಂತಹ ಹಬ್ಬ, ಅವಳಡವಿಯಲಿ ಬೆಳೆದುದ್ದೇ ಸಣ್ಣದಾಗಿ ಅವಳಿಗರ್ಪಣೆ  ,

 ೧೦೧ ಕುಡಿ ಗದ್ದೆ ಗುಡ್ಡಗಳಲಿ ಥರ ಥರನಾದ ಎಲೆಗಳ ಸಂಗ್ರಹಿಸಿ ,

ಗೌರೀಬಳೆಯ ತಂದು ಗದ್ದೆಯಲೊಂದು ಕೋಲುಗಳಲ್ಮೂಲಕ ಸಿದ್ಧಪಡಿಸಿದ ಆಗಮ ದ್ವಾರವ ಮಾಡಿ ಸಿಕ್ಕಿಸಿ, ,ಬೆಟ್ಟದ ನೆಲ್ಲಿ,ಕಂಚಿಕಾಯಿ,ಚೆಂಡು ಹೂವು, ಮುಂತಾದವನ್ನಿಡುವುದು, ಕಣ್ಣೇರು (ಗೋಸಗಣಿ ನೀರು)ಸಾರಿಸಿ ಬರುವುದು,
ಎಲ್ಲ ಎಲೆಗಳ ಸೇರಿಸಿ, ಉಪ್ಸೊಪ್ಪು ಪಲ್ಯೆಯ ಮಾಡಿ, ಹಾಲಿನ ಅಂಬಲಿಯ ಮಾಡಿ, ಇಬ್ಬನಿ ಹಿಟ್ಟಿನ ಸಿಹಿಪಾಕವ ಮಾಡಿ, ಬಾಳೇಎಲೆಯ ಕೊಟ್ಟೆಕಡುಬನ್ನ ಸಿದ್ಧಪಡಿಸುವುದು,
 ಸರಿಯಾಗಿ ಬೆಳಗಿನ ಜಾವ ೦೪ರ ಹೊತ್ತಿಗೆ ಎದ್ದು

ಹೊಸ ನೀರ ತಂದು ಸ್ನಾನಗೈದು, ಪೂಜಾ ಸಾಮಾಗ್ರಿ , ನೈವೇದ್ಯಗಳನ್ನೊಂದು ಬಾರಿ , ಮನೆಯ ಮಧ್ಯದೊಳಗೆ ಪೂಜೆ ಮಾಡಿ, ಅಲ್ಲಿ ಹೊತ್ತಿಸಿದ ದೀಪವನ್ನ ಹಾಗೂ ಸಕಲ ಸಾಮಾಗ್ರಿಗಳನ್ನು ಫಸಲ್ಹೊತ್ತು ಆಗಷ್ಟೇ ಹಾಲುತುಂಬಿದ ಭತ್ತದ ಗದ್ದೆಗಳೆಡೆಗೆ ಸಾಗಿಸುವುದು, 
ಗದ್ದೆಯಂಚಿನಲಿ ಸಿಂಗರಿಪ ದ್ವಾರದೆದುರಿನಲಿ, ಹೊತ್ತು ತಂದ ದೀಪವನಿರಿಸಿ,ಪುಷ್ಪಗಳಿಂದ ಅಲಂಕೃತಗೊಳಿಸಿ,ಸಕಲ ನೈವೇದ್ಯಗಳ ಮಿಶ್ರಣ ಮಾಡಿ, ಜಾಗಟೆ-ಘಂಟೆ-ಶಂಖೋನ್ನಾಧದಲಿ ಮಂಗಳಾರತಿಯ ಬೆಳಗಿಸಿ,ಇಡೀ ಪ್ರಕೃತಿಯ ಎಚ್ಚರಗೊಳಿಸಿ,

ನಿನ್ನೇ ನಂಬಿ ಬದುಕಿಹೆವು ಈ ವರುಷ ಉತ್ತಮ ಫಸಲೊದಗಲೆಂದು ಬೇಡಿಕೊಂಡು, 

.

ಹಕ್ಕಿಪಿಕ್ಕಿ ಎದ್ದಿರದ ಆಹೊತ್ತಲಿ ಮಿಶ್ರಣಿಸಿದ ನೈವೇದ್ಯೆಯ ಹೊತ್ತು, 

ಕೈಯ್ಯಲ್ಲೊಂದು ಮುಷ್ಠಿ ನೈವೇದ್ಯಯ ಹಿಡಿದು ನಾಕ್  ಸೊಲ್ಲು 

* ಅಚ್ಚಂಬ್ಲಿ,ಹಾಲಂಬ್ಲಿ,ಬೇಲಿಮೇಲೆ ದಾರಿಹೀರೇಕಾಯಿ,ಗುಡ್ಡದ್ಮೇಲಿನ್ ನೂರಾ ಒಂದ್ ಕುಡಿ ಹಾಕ್ ಮಾಡಿ ಬಯಕೆ ತಂದೀನಿ, ಭೂಮಿ ತಾಯಿ ಬಾಯ್ಬಿಟ್ಟು ಊಟಮಾಡು, ‘ಹೂಲ್ಗ್ಯ , ಹೂಲ್ಗ್ಯ’* 

ಅಂತ ಕೂಗಿ ನೈವೇದ್ಯಯ ಬೀರುತ್ತಾ ನಮ್ಮ ನಮ್ಮಗಳ ಆಸೆಯ ಈಡೇರಿಸೋ ಭೂಮಿಗೆ ಅನ್ನವ ಬೀರುತ್ತಾ ಕೂಗಿಡುತ್ತಾ ಸಾಗುವುದು,
ಮನೆ ಸೇರುವ ಹೊತ್ತಿಗೆ ಯಾರೊಡನೆ ಮಾತನಾಡುವಂತಿಲ್ಲ, ಮೌನವಾಗಿ ಬಂದು ಹಕ್ಕಿ ಹರಬಿ ಅಥವಾ ಅಕ್ಕಿ ಹೊತ್ತ ಪತ್ತಾಸಿನೊಳಗೆ ಆ ನೈವೇದ್ಯಯ ಪ್ರೋಕ್ಷಿಸಿದ ಕೈಯ್ಯನು ಸ್ವಚ್ಛಗೊಳಿಸತಕ್ಕದ್ದು
ಹಾಗೆಯೇ, ಪಾತ್ರೆಯಂಡಲಿ ಉಳಿಸಿಕೊಂಡ ನೈವೇದ್ಯಯ ಎಲ್ಲರೂ ರುಚಿಸತಕ್ಕದ್ದು, 

“ವರ್ಷದ ಕೂಳನೀಯ್ವ ಭೂಂತಾಯಿಗೆ ಒಂದಿನದ ಊಟ”

ಈ ಎಲ್ಲಾ ಸಂಪ್ರದಾಯ ತಕ್ಕ ಆಚರಣೆಗಳು ಕೇವಲ ಭಯ-ಭಕ್ತಿಯ ಸ್ವರೂಪವಲ್ಲವಾದರೂ, ಪ್ರಕೃತಿ ಹಾಗೂ ಮಾನವ  ಜೀವಿಗಳ ನಡುವಣ ಸಂಬಂಧಗಳನ್ನ ಬಂಧಿಸುವಲ್ಲಿ ಇದೊಂದು ಹಬ್ಬದ ಮಹತ್ವ ಶ್ರೇಷ್ಠವಾದದ್ದು, 

ಹಾಗೆಯೇ ಆ ದಿನ ಭೂಮಿಯನ್ನು ಘಾಸಿಗೊಳಿಸುವಂತಹ , ಅರ್ಥಾತ್‌ ಅಗೆಯುವುದು, ಹೊಂಡ ತೋಡುವುದು , ಇತರೆ ಕೆಲಸಗಳನ್ನು ಮಾಡುವಂತಿಲ್ಲ,
ಆ ನೂರಾ ಒಂದು ಎಲೆಗಳಲ್ಲಿ, ಎಷ್ಟು ವಿಷದ್ದಿರುತ್ತವೋ, ಎಷ್ಟು ನಂಜಿನದ್ದಿರುತ್ತವೋ, ಎಷ್ಟು ಅಂಮೃತವಾಗಿರುತ್ತವೋ, ಎಷ್ಟು ಔಷಧಯುಕ್ತವಾಗಿರುತ್ತವೋ ತಿಳಿಯದು, ಆದರವೆಲ್ಲವನ್ನು ಸ್ವೀಕರಿಸುವುದು ಆರೋಗ್ಯಕ್ಕೆ ಕಷಾಯದಂತೆ ಅನ್ನೋದು ಮಾತ್ರ, ವೈಜ್ಞಾನಿಕ, 

-ಅಲ್ಪವಿರಾಮಿ

#ಅಲ್ಪವಿರಾಮಿತ_ನಿತ್ಯಸ್ಮರಾಮಿತ_ಮೌನಗಮನವೀಯುತ

#ಭೂಮಿಹುಣ್ಣಿಮೆ #ಭೂಂತಾಯಿಯ_ಬಯಕೆಶಾಸ್ತ್ರ

Blog at WordPress.com.

Up ↑