ಕುವೆಂಪು ವೈಚಿತ್ರ್ಯ

ನಾನು ಹುಟ್ಟಿದ ವರುಷವೆ ಅವರು ತೀರಿಕೊಂಡಿದ್ದಂತೆ,ಅವರನ್ನೊಮ್ಮೆ ನೋಡಬೇಕಿತ್ತು ಎಂದು ಯಾವಾಗಲೂ ಎಂದುಕೊಳ್ಳುತ್ತಿರುವೆನು,

ಒಂದು ಕುಗ್ರಾಮ ಕುಪ್ಪಳಿ, ಕೊಪ್ಪ-ತೀರ್ಥಹಳ್ಳಿಯ ಸೇತುಬಂಧದ ಊರೆನ್ನಬಹುದು, ಅಲ್ಲಿದ್ದವರು ರಾಷ್ಟ್ರಮಟ್ಟದ ಮನ್ನಣೆ ಹೇಗೆ ಸಾಧ್ಯವಾಯಿತೆಂದು ಊಹಿಸಲಸಾಧ್ಯ,

ವಿಶ್ವಮಾನವನಾಗಿದ್ದಾದರು ಹೇಗೆ ಅಂತ,

ನನಗರಿವಾದದ್ದು ಹುಟ್ಟಿನಿಂದ ಯಾರೂ ದೊಡ್ಡವರಾಗೋದಿಲ್ಲ, ಬೆಳೆದಂತೆಲ್ಲಾ ಜ್ಞಾನ ವಿಸ್ತಾರಿಸಿಕೊಳ್ಳುವುದರಿಂದ ಎಂತಹ ದರಿದ್ರನಾದರೂ ಉತ್ತಮನೆನಿಸಿಕೊಳ್ಳುತ್ತಾನೆಂದು,

ಅವರ ಒಂದೊಂದು ಬರಹವು ಅದಾವುದೋ ಹೊಸ ವೈಚಾರಿಕತೆಯ ಹೊತ್ತು , ಅದೆಷ್ಟೋ ಮೂಢತೆಗಳ ಮೌಢ್ಯಗಳ ನಡುವೆಯೇ, ಬೇವಿನ ಮರದ ತಂಪ ಘಮಲ ತೀಡಿ ಸೂಸುವ ಘಮಲು ಇಂದಿಗೂ ಜೀವಂತ,

ಆ ಪ್ರಶಾಂತ ವನದ ಚೌಕಿಮನೆಯನ್ನ, ಅದರಲ್ಲಿನ ಸೊಗಡನ್ನ ಪ್ರತಿಯೋರ್ವರು ನೋಡರಿತು ತಲ್ಲೀನರಾಗಲು

ಒಮ್ಮೆಯಾದರು ಭೇಟಿ ಕೊಡದೆ ಇರಬೇಡಿ..

ತೀರ್ಥಹಳ್ಳಿಯ ದೇವಂಗಿ ಮಾರ್ಗದಿಂದ ೨೦ಕಿಲೋಮೀಟರು ಅನತಿಯಲ್ಲಿದೆ

ಕುಪ್ಪಳಿ

ಹಿರೇಕೊಡಿಗೆ,ಕೊಪ್ಪ ತಾಲ್ಲೂಕು

ಚಿಕ್ಕಮಗಳೂರು .

ಪರ್ಯಾಯ ಹಸ್ತ

:||ಜೀವನ = ಜೀವದ+ವನ  ಅನ್ನಬಹುದೇನೋ,||:

ನೂರು ವ್ಯಕ್ತಿಗಳಿಗೆ ಜೀವನ ಅಂದರೇನು ಅಂತ, ಇಲ್ಲವೇ ಕೆಲವೊಂದು ಪದಗಳನ್ನ ನೀವು ಉಚ್ಛರಿಸಿದ ನಂತರ ಆ ಕೇಳುಗ ವ್ಯಕ್ತಿಗಳ ಮನದಲ್ಲಿ ತಟ್ಟನೆ ಮೂಡುವಂತಹ ಆಲೋಚನೆ ಅಥವಾ ಅನಿಸಿಕೆ ಅಥವಾ ಪದಗಳನ್ನು  ಬರೆಯಲು ಹೇಳಿದರೆ ಹಲವು ಬಗೆಯಲ್ಲಿ ;
ವಿಸ್ತಾರ,ತಾತ್ಸಾರ,ಮಥ್ಸರ,ವೈಷಮ್ಯ,ನೋವು,ಖುಷಿ,ಸಿಡಿಲಿನ ಗುಣಗಳುಳ್ಳ ಉತ್ತರವನ್ನು ಪಡೆಯಲೂಬಹುದು , ಪಡೆಯದೇನೇ ಇರಲೂಬಹುದು.
ಪ್ರತಿಶತ ೪೦%ದಷ್ಟು ಒಂದೇ ತೆರನಾದ ಉತ್ತರವಿರಬಹುದು, ಇನ್ನುಳಿದ ೫೮%ದಷ್ಟು ಭಿನ್ನ ವಿಭಿನ್ನವಾಗಿರಬಹುದು , ಹಾಗೂ ಇನ್ನುಳಿದ ೦೨%ದಷ್ಟು ಮಂದಿ ಸೊನ್ನೆಯ ಮೊದಲೇ ಹೊತ್ತು ಎಲ್ಲದರ ನಡುವಿನ ಗೊಂದಲಗಳ ಸೇತುಬಂಧಗಳಂತೆ, ಎಲ್ಲಿ ,ಏನು,ಯಾವುದು,ಯಾಕೆ,ಯಾವಾಗ,ಎಷ್ಟು, ಎಂಬೆಲ್ಲಾ ಮೂಲಧಾತುಗಳಲ್ಲಿ ತಮ್ಮನ್ನು ತಾವು ಕಳೆದುಹಾಕಿಕೊಂಡು ಯಾವಾಗಲೂ ಗೊಂದಲದ ಗೂಡಲ್ಲೆ ,ಹಾರಾಟಕ್ಕಾಗಿ ತೆವಳುತ್ತಿರುತ್ತಾರೆ ,
ಸಣ್ಣ ಸಮಸ್ಯೆಗಳೆದುರಾದವೆಂದರೆ, ಯಾವುದೋ ಒಂದು ಜಗತ್ತು ಕಳೆದುಕೊಂಡಷ್ಟು ತಲೆಬಿಸಿ ಮಾಡಿಕೊಂಡು, ಚಿಂತಾಕ್ರಾಂತರಾಗುತ್ತಾರೆ, ಇವರುಗಳು ಉಳಿದವರಿಗಿಂತ ಭಿನ್ನ ಮನೋಭಾವದವರಾದರೂ, ತುಂಬಾ ಚುರುಕೇನಲ್ಲ, ಆದರೆ ಬುದ್ಧಿವಂತರೇ, ಜಾಣ-ಪೆದ್ದು ಅನ್ನಬಹುದು,
ಇವರಿಗೆ ಅರಿವ ಮನಸ್ಕರು ಒಂದು ಕೂದಲೆಳೆಯಷ್ಟು ಕಾಳಜಿ,ಸ್ಪೂರ್ತಿ, ಮಾತು,ಗಮನ ಕೊಟ್ಟರೆ ಅವರಾವ ಸಾಧನೆಯ ಮಾಡರೋ, ಅವರಿಗೆ ಗೊತ್ತಿರಲಾರದಂತ ಸಾಧನೆ ಮಾಡಬಲ್ಲರು, ಆದರಿಲ್ಲಿ, ಅವರನರಿವ ಮನಸ್ಸುಗಳ ಕೊರತೆಯಿದೆಯಷ್ಟೇ

ಮಿಂಚುಹುಳ

ನಾ ಕಂಡ ನನಸುಗಳಲ್ಲೊಂದು: ನಾ ಕಂಡ ನನಸ್ಸುಗಳಲ್ಲದೊಂದು ಮಿಂಚುಹುಳ,

ಮಲೆನಾಡಲ್ಲಿ ಸರ್ವೇಸಾಮಾನ್ಯವಾದ ಮಿಂಚುಗಳದ್ದೊಂದು ಪಾತ್ರ, ನಿಶಾಚಿರಿಗಳವು, ರಾತ್ರಿಯ ವೇಳೆ ಜಾಗರಣೆಯ ಹೂಡಿ ದೀಪವ ಹಿಡಿದು ಅಲ್ಲಲ್ಲಿ ಅದೇನನೋ ಜಾಲಾಡಿ ಹುಡುಕಹೊರಟಂತ ಭಾವ ಮೂಡುವುದು ಖಂಡಿತಾ, ಅಮವಾಸ್ಯೆಗೆ ಸಮೀಪಿಸುತ್ತಿದ್ದಂತೆ ಇವುಗಳ ಲಗ್ಗೆ,

ನಾನಂದು ದಿನ ಕಾಲೇಜು ದಿನಗಳಲ್ಲಿ ಮಿಕ್ಕಿದ ಅವಧಿಯಲ್ಲಿ ಗ್ಯಾರೇಜು ಕೆಲಸಕ್ಕೆ ಹೋಗಿ ಮನೆಗೆ ಹೊರಡುವಷ್ಟರಲ್ಲಿ ಗಂಟೆ ಎಂಟಾಗಿರುತ್ತಿತ್ತು, ಅಂದು ನನ್ನ ಬಳಿ ಬೈಸಿಕಲ್ಲು ಕೂಡಾ ಇರಲಿಲ್ಲ, 

ಬಸ್ಸಂತು ನಮ್ಮೂರಿಗೆ ಇರಲಿಲ್ಲ, ಎರಡೂವರೆ ಮೈಲಿ ನಡೆಯಬೇಕಿತ್ತು, ಕೈಯ್ಯಲ್ಲಿ ಸಣ್ಣದದೊಂದು ಜಂಗಮಗಂಟೆ ಕಾಲ್ಬೆಳಕಿಗೆ ಸಾಕಾಗುತ್ತಿತ್ತು, ರಸ್ತೆ ಯಾವುದು, ಚರಂಡಿ ಯಾವುದು ಮಟ್ಟು-ಉಡಿ(ಪೊದೆ) ಯಾವುದೆಂದು ತಿಳಿಯದಂತಹ ಕದ್ದಿಂಗಳ ರಾತ್ರಿ,

ಆ ದಿನ ಎಲ್ಲೆಲ್ಲೋ ಓಲಾಡಿಕೊಂಡು ಸಾಗಬೇಕಾದರೆ, ಕಾಲುಮೈಲು ಅನತಿ ದೂರದಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ದೀಪಗಳಂತೆ ರಾರಾಜಿಸುತ್ತ ಹೊಳೀತಿದ್ದುದನ್ನು ಕಂಡೆ , ಹತ್ತಿರ ಸಮೀಪಿಸಿದಾಗಲೆ ತಿಳಿದಿದ್ದವು ಮಿಂಚುಹುಳಗಳೆಂದು, ಖುಷೀ ಅಗ್ಹೋತು, ಯಾಕಂದ್ರೆ, ಈಗ ಹಾದಿ ಎಲ್ಲಿದೆ ಅಂತ ತಿಳಿಯುತ್ತಿತ್ತು, ಅವುಗಳು ಸುರಕ್ಷಾ ಇಷಾರೆಗಳಂತೆ ಇಕ್ಕೆಲಗಳ ಬದಿಯಲ್ಲೂ ಇದ್ದವು ಹಂಗಾಗೀ, ಮನೆವರೆಗು ಯಾವ ತ್ರಾಸಿಲ್ಲದೆ ನಡೆದೆ,

ಮಲಗಿದ್ದ ಒಂದಿನ ರಾತ್ರಿ ಗಂಟೆ ಹನ್ನೆರಡರ ಹತ್ತತ್ರ,ಯಾಕೋ ಕಣ್ಬಿಡ್ತೀನಿ ಇಡೀ ಶಯನಾಗೃಹ ಬೆಳ್ಕೇ ಬೆಳ್ಕು , ಎಂತದಪ್ಪ ಅಂತ ದಿಟ್ಟಿಸಿ ಕಣ್ಬಿಟ್ಟೆ, ತಪ್ಪಿಸಿಕೊಂಡು ಕಿಟಕಿ ಕಂಡಿಯಲ್ಲಿ ನುಸುಳಿಕೊಂಡ ಮಿಂಚುಹುಳ, ದಿಕ್ಕೆಟ್ಟು ನಾಲ್ಕು ಮೂಲೆ ಗೋಡೆಗೂ ಮುಂಡ್ರಾಯ್ತಾ (ಡಿಕ್ಕಿ ಹೊಡೆದುಕೊಂಡು) ಬಳಲಿಕೊಂಡಂತೆ ಕಾಣಿಸಿತು, ನಾನಂದೇ ಅಲೋ ಮರಯ ಹೆಣ್ಣು ಹುಡುಕ್ತಾ ಬಂದಿಯಲಾ, ನಮ್ಮನೇಲಿ ಹೆಣ್ಣಿಲ್ಲೋ ಮರಯ , ಬೇಕಾರೆ ಅಂಗಳದಲ್ಲಿ ಹುಡುಕ್ಕೋ ಅಂತ, ಹಾರಿ ಬಿದ್ದು ಹಿಡ್ದೆ, ಅದಕ್ಕೊಂತರ ನಾಚ್ಕಿ ಆಗಿ, ದೀಪದ ಪ್ರಭಾವವನ್ನ ಕಡಿಮೆ ಮಾಡಿಕೊಂಡು, ಆತ್ ಮರ್ರೆ ಒಂಚೂರು ಅಂಗಳಕ್ಕೆ ದಾರಿ ತೋರಿಸಿ ಅಂದಂತೆ ಅನ್ನಿಸಿತು, ಕಿಟಕಿಯ ಚೂರು ಓರೆ ಮಾಡಿ ಹೊರಗೆ ಹಾರಿಬಿಟ್ಟೆ, ಸತ್ನೋ ಕೆಟ್ನೋ ಅಂತ ಧಮ್ ಕಟ್ಟಿ ರಭಸದಿ ಹಾರಿತು , ಈಗದರ ಬೆಳಕಿನ ಪ್ರಭಾವ ಹೆಚ್ಚಿತ್ತು, ತನ್ನ ಅಂಬರ ತಾರೆಯ ಹುಡುಕಲು ತನ್ನದೇ ಪ್ರಭಾವಳಿಯ ಪಸರಿಸಿಕೊಂಡು ಪಿಳ್ಳೆಮರದಡಿ ಮರೆಯಾಯಿತು, ನಾನೋಡಿಲ್ಲಂದಿದ್ರೆ ನಮ್ಮನೆ ಸಲಗದ(ಜೇಡದ) ಹುಳುವಿನ ಬಲೆಯೊಳ ಸೇರಿ, ಇನ್ನೊಂದಿಷ್ಟು ಬಲೆಹೆಣೆಗೆ ದೇಣಿಯಾಗುತಿತ್ತಲ್ಲವೆಂದು , ನನ್ನದೇ ಕನಸಿನ ಹೊದಿಕೆಯ ಹೊದ್ದು ಮಲಗಿದೆ…ಜೀರುಂಡೆಯ ನಿನಾದದಲಿ.

#ಮಿಂಚುಹುಳ #glowworm #minchuhula #malenaadu#glowworm_in_my_life #partofmalnad#ಮಲೆನಾಡ_ಅವಿಭಾಜ್ಯ_ಅಂಗಗಳಲ್ಲೊಂದು #ಗುಜಮಸ

#sachingjz#gumata#ಗುಮಟ#ತೀರ್ಥಹಳ್ಳಿ#thirthahalli

ಸ್ಥರ . ಸಾವಿರ

ಬದುಕಿರುವಷ್ಟು ದಿನ ಏನನ್ನೋ ಹುಡುಕಬೇಕು, ಇನ್ನೇನನ್ನೋ ಸಾಧಿಸಬೇಕು, ಮತ್ತೆಲ್ಲೇನೋ ಇರಬೇಕೆಂದೆಲ್ಲಾ, ಹಂಬಲಿಸೋ ಜೀವಕೆ, ತಾನಿರುವ ಜಾಗ ಬರೀ ಗೊಬ್ಬರದ ರಾಶಿಯಂತನಿಸುವುದು ಸಹಜ,

ನೀರು ನಿಂತಲ್ಲಿ ನಿಲ್ಲಬಾರದು ,ಹರಿಯುತಲೇ ಇರಬೇಕು, ಕಷ್ಟನಷ್ಟಗಳ ತುಂಬಿಕೊಂಡು ಬಳುಕಬೇಕು,

ಸಿದ್ಧಾಂತಗಳು ಆದರ್ಶಗಳವು, ಚೇತನಾವಸ್ಥೆಯ ಕಾಯ್ದುಕೊಳ್ಳುವ ಸ್ಥಿತಿಗಳೇ ಹೊರತು, ಬರೀ  ಅವೇ  ಜೀವನದ ನೀತಿಗಳಲ್ಲ,

ಒಂದಷ್ಟನ್ನ ಬಿಡಲೂಬೇಕಾಗುತ್ತದೆ, ಇನ್ನೇನನ್ನೋ ಧರಿಸಿಕೊಳ್ಳಲೂಬೇಕಾಗುತ್ತದೆ, ಎಲ್ಲವನ್ನೂ ಅವುಡುಗಚ್ಚಿಹೋದರೆ, ತನ್ನದೆಂಬುದು  ದೂರವೇ ಸರಿಯುತ್ತಲಿರುತ್ತದೆ, 

ಭರವಸೆಗಳಿಲ್ಲದಿದ್ದರೂ ಮುನ್ನುಗ್ಗಿ ನಡೆಯಬಲ್ಲ ಭಂಡ ಧೈರ್ಯವೂ ಬೇಕಾಗುತ್ತದೆ, ಜೀವನವು ಒಂದಷ್ಟನ್ನು ನಡೆಯಲು ಬಿಡುತ್ತದೆ, ಇನ್ನೊಂದಿಷ್ಟನ್ನು ನಡೆಸಲು ಪಾಲಿಗಿರಿಸಿರುತ್ತದೆ, 

ನಾವುಗಳ ಬರೀ ಇದ್ದೆವ ,ಮಾಡಿದೆವಾ, ಹೋದೆವಾ ಅಂತಾಗಬಾರದು, ಒಂದಷ್ಟನ್ನ ಬದಲಿಸಬೇಕು, ಒಂದಷ್ಟವರಿಗೆ ಅರಿವಾಗಬೇಕು, ಇನ್ನೊಂದಷ್ಟವರಿಗೆ ನೆರವಾಗಬೇಕು, ಯಾವುದೂ ಆಗಿಲ್ಲವೆಂದರೆ ತನ್ನ ಸಂಸಾರದೇಳಿಗೆ ನೋಡಬೇಕು ಆಗಷ್ಟೇ ಸ್ವಾಸ್ಥ್ಯ ಸಮಾಜದ ಮುನ್ನುಡಿ ಪ್ರಾರಂಭವಾಗಿರುತ್ತದೆ,

ನಾ ಬರೆದ ಮಾತ್ರಕ್ಕೆ ನನಗದರರಿವು ಅಷ್ಟಿದೆಯೆಂದಲ್ಲ , ಆದರೆ ಯೋಚನೆಗಳಿಗದರರಿವಿದೆ ಅದಕ್ಕಿಲ್ಲಿ ಪ್ರಸ್ಥಾಪಿಸಿದೆ,

ಜೀವನದ ಪ್ರತಿ ಸ್ಥರಗಳಲ್ಲಿ ಅರಿವಾಗಿಲ್ಲವಂದೆನಗೆ ಆದರೆ,ಶಾಂತ ಚಿತ್ತತೆಯಲಿ ನನ್ನನಾ ಬಳಸಿದಾಗ ಎಲ್ಲವೂ ಒಂದೊಂತರಾ ಮೆಟ್ಟಿಲುಗಳೆನಿಸಿದವು…😊

ಗುಜಮಸ

ನೀಲಾಂಜನ ಮತ್ತು ಅಜ್ಜಿ


ನೀಲಾಕಾಶ ಮಸುಕಾದಂತೇ, ಅಜ್ಜಿಯ ಮಣಮಣ ಶುರುವಾಗುತ್ತಿತ್ತು,  ದೇವರಿಗೆ ನೀಲಾಂಜ್ಙೆ ಇಡ್ಲಿಲ್ಲಲಾ ಎಂದು, 

ನಮದೋ ಒಂದು ತೆರನಾದ ಆಲಸ್ಯ, ಸರಿಯಾಗಿ ಏಳರ ಹೊತ್ತಿಗೆ ವಿದ್ಯುತ್ ಪ್ರವಾಹ ನಿಂತ್ಹೋದಾಗ ದೀಪದ ಗೂಡ ಹುಡುಕಲು ಅಜ್ಜಿ ಮುಂಡ್ರಾಡ್ತಾ ಹುಡುಕಲು , ಮಧ್ಯದೊಳಗೆ ಹಚ್ಚಿದ ನೀಲಾಂಜನೆಯ ತೊನೆದಾಟದ ಬೆಳಕೇ ದಾರಿ, 

ಅದೊಂತರದ ಅಜ್ಞಾನದ ಹಾದಿಯಲಿ ಜ್ಞಾನದ ಬೆಳಕಂತೆ ಒಂದಷ್ಟು ದೂರ ಸಾಗಲು ನೆರವಿಗಿತ್ತು,

ಎಲ್ಲ ಅರಿವಾಗುವ ಹೊತ್ತಿಗೆ ಅಜ್ಜಿ ಇಹದಲ್ಲಿರಲಿಲ್ಲ, ಹಚ್ಚುವ ಒಂದಿರುಳ ನೀಲಾಂಜನೆಯೆಂದರೆ , ನಾ ಹೊಸ್ತಿಲು ದಾಟಿ ಸಾಗರಗಳ ದಾಟಿ ಬಂದಾಗಿತ್ತು,

ಅಂದಿನಿಂದ

ಒಂದಿಲ್ಲೊಂದು ನೆನಪುಗಳಲ್ಲಿ ‘ ಅಜ್ಜಿ ಮತ್ತು ನೀಲಾಂಜನ ‘

Create a free website or blog at WordPress.com.

Up ↑